ಜುರ ಪರ್ವತಗಳು -
 ಯೂರೋಪಿನ ರೈನ್ ಮತ್ತು ರೋನ್ ನದಿಗಳ ನಡುವೆ ಹಬ್ಬಿರುವ ಪರ್ವತವ್ಯವಸ್ಥೆ. ಇದರ ಬಹುಭಾಗ ಫ್ರಾನ್ಸಿಗೂ ಸ್ವಲ್ಪ ಭಾಗ ಸ್ವಿಟ್‍ಜರ್ಲೆಂಡಿಗೂ ಸೇರಿದೆ. ಇದರ ಉದ್ದ ಸುಮಾರು 230 ಕಿಮೀ. (143 ಮೈ.), ಅಗಲ 61 ಕಿಮೀ. (38 ಮೈ.). ಈ ಸಮೂಹದಲ್ಲಿ ಉದ್ದಕ್ಕೂ ಅನೇಕ ಸಮಾಂತರ ಶ್ರೇಣಿಗಳ ಏಣುಗಳು ಒತ್ತಾಗಿ ಹರಿದಿವೆ. ಅಲ್ಲಲ್ಲಿ ಅಡ್ಡಡ್ಡ ಹಾಯುವ ಕಮರಿಗಳುಂಟು. ಇದು ಪೂರ್ವದ ಕಡೆ ಹೆಚ್ಚು ಕಡಿದು, ಪಶ್ಚಿಮದ ಕಡೆ ಸಾಮಾನ್ಯವಾಗಿ ಇಳಿಜಾರು. ಈ ವ್ಯವಸ್ಥೆಯ ಮುಖ್ಯನದಿಗಳಾದ ಡೂ ಮತ್ತು ಆನ್ ಪಶ್ಚಿಮದ ಕಡೆಗೆ ಹರಿಯುತ್ತವೆ. ಕ್ರೆಡ್ ಲಾ ನೇಝ್ (1714ಮೀ), ಲ ಡೋಲ್ (1669ಮೀ), ಕೊಲಂಬೀರ್ ಡ ಝೆಕ್ (1683ಮಿ), ರಕ್ಯೂಲೇ (1709ಮೀ)-ಇವು ಇಲ್ಲಿಯ ಕೆಲವು ಪ್ರಮುಖ ಶಿಖರಗಳು.

ಈ ಶ್ರೇಣಿಯ ಉತ್ತರ ಭಾಗದಲ್ಲಿರುವ ಬೆಲ್‍ಫೊರ್ಟ್ ಕಣಿವೆ ಯೂರೋಪಿನ ಮುಖ್ಯ ಭೌಗೋಳಿಕ ಕೇಂದ್ರಗಳಲ್ಲೊಂದು. ಇದು ಜುರ ಮತ್ತು ವೋಝ್ ಪರ್ವತ ಶ್ರೇಣಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. 1870-71ರ ಫ್ರಾನ್ಸ್-ಪ್ರಷ್ಯ ಯುದ್ಧದಲ್ಲಿ ಈ ಕಣಿವೆ ವಹಿಸಿದ ಪಾತ್ರ ಬಲು ದೊಡ್ಡದು. ಫ್ರೆಂಚರ ಸಾಹಸದ ಫಲವಾಗಿ ಕಣಿವೆ ಫ್ರಾನ್ಸಿನಲ್ಲೇ ಉಳಿಯಿತು.
ಈ ಶ್ರೇಣಿಗಳು ಪಶ್ಚಿಮಕ್ಕಿಂತ ಪೂರ್ವದ ಕಡೆ ಹೆಚ್ಚು ಸಮತಟ್ಟಾಗಿವೆ. ಶ್ರೇಣಿಯ ದಕ್ಷಿಣದ ಕಡೆ ಚಾಚಿಕೊಂಡಿರುವ ಒಂದು ದೊಡ್ಡ ಭೂ ಅಗ್ರ ರೋನ್ ನದಿಯನ್ನು ಬಳಸಿ ಹರಿಯುವಂತೆ ಮಾಡಿದೆ.
ಜುರ ಪರ್ವತವ್ಯವಸ್ಥೆಯ ಉತ್ತರದ ಇಳಿಜಾರಿನಲ್ಲಿ ಬೆಲ್‍ಫೊರ್ಟ್, ಮಲ್ಯೂeóï ಮತ್ತು ಬಾಸೆಲ್‍ಗಳು ಮುಖ್ಯಪಟ್ಟಣಗಳು. ಬಜ್ಯಾನ್‍ಸನ್ ಒಂದು ಪ್ರಮುಖ ಕೈಗಾರಿಕಾ ಕೇಂದ್ರ. ಇದು ಉತ್ತರದ ಡೂ ನದಿಯ ದಡದ ಮೇಲಿದೆ. ಈ ಪರ್ವತವ್ಯವಸ್ಥೆ ಫ್ರಾನ್ಸಿನಿಂದ ಜರ್ಮನಿ, ಸ್ವಿಟ್‍ಜóರ್ಲೆಂಡ್ ಮತ್ತು ಇಟಲಿಗಳಿಗೆ ಹೋಗುವ ಮಾರ್ಗಗಳಲ್ಲಿದೆ. ಈ ಭೌಗೋಳಿಕ ಸನ್ನಿವೇಶ ಇದಕ್ಕೆ ಅಂತರಾಷ್ಟ್ರೀಯ ಮಹತ್ತ್ವವನ್ನು ತಂದುಕೊಟ್ಟಿದೆ.
(ಡಿ.ಎಸ್.ಜೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ